ಅಮೆರಿಕಾಗೆ ಭಾರತ ಮತ್ತೊಂದು ಶಾಕ್; ಶಸ್ತ್ರಾಸ್ತ್ರ, ಯುದ್ಧ ವಿಮಾನ ಖರೀದಿಗೆ ‘ವಿರಾಮ’?

ನವದೆಹಲಿ: ಭಾರತದ ಮೇಲೆ ಶೇ.50ರಷ್ಟು ತೆರಿಗೆ ಹೇರುವ ಬೆದರಿಕೆ ಹಾಕಿರುವ ದೊಡ್ಡಣ್ಣ ಅಮೆರಿಕಕ್ಕೆ ಭಾರತ ಶಾಕ್ ಮೇಲೆ ಶಾಕ್ ನೀಡುತ್ತಿದ್ದು, ಈ ಬಾರಿ ಶಸ್ತ್ರಾಸ್ತ್ರ, ಯುದ್ಧ ವಿಮಾನ ಖರೀದಿ ಯೋಜನೆಗೆ ಭಾರತ ತಾತ್ಕಾಲಿಕ ವಿರಾಮ ಹಾಕಿದೆ ಎಂದು ಹೇಳಲಾಗಿದೆ.
ಹೌದು.. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ರಫ್ತುಗಳ ಮೇಲೆ ವಿಧಿಸಿದ ಸುಂಕಗಳು ದಶಕಗಳಲ್ಲಿಯೇ ಅತ್ಯಂತ ಗರಿಷ್ಟ ಮಟ್ಟಕ್ಕೆ ತಲುಪಿರುವ ಬೆನ್ನಲ್ಲೇ ಭಾರತದ ಅಸಮಾಧಾನದ ಮೊದಲ ಸ್ಪಷ್ಟ ಸಂಕೇತ ಹೊರಬಿದ್ದಿದ್ದು, ಕೇಂದ್ರ ಸರ್ಕಾರವು ಹೊಸ ಅಮೇರಿಕನ್ ಶಸ್ತ್ರಾಸ್ತ್ರಗಳು ಮತ್ತು ವಿಮಾನಗಳನ್ನು ಖರೀದಿಸುವ ಯೋಜನೆಯನ್ನು ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ.
ಈ ವಿಷಯದ ಬಗ್ಗೆ ಪರಿಚಿತವಾಗಿರುವ ಮೂವರು ಭಾರತೀಯ ಅಧಿಕಾರಿಗಳು ದೇಶೀಯ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದು, ‘ಕೇಂದ್ರ ಸರ್ಕಾರವು ಹೊಸ ಅಮೇರಿಕನ್ ಶಸ್ತ್ರಾಸ್ತ್ರಗಳು ಮತ್ತು ವಿಮಾನಗಳನ್ನು ಖರೀದಿಸುವ ಯೋಜನೆಯನ್ನು ಸ್ಥಗಿತಗೊಳಿಸಿದೆ’ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಕೆಲವು ಖರೀದಿಗಳ ಕುರಿತು ಘೋಷಣೆಗಾಗಿ ಭಾರತವು ಮುಂಬರುವ ವಾರಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ವಾಷಿಂಗ್ಟನ್‌ಗೆ ಕಳುಹಿಸಲು ಯೋಜಿಸಿತ್ತು, ಆದರೆ ಆ ಪ್ರವಾಸವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಆಗಸ್ಟ್ 6 ರಂದು ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತ ರಷ್ಯಾದ ತೈಲ ಖರೀದಿಗೆ ಶಿಕ್ಷೆಯಾಗಿ ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇಕಡಾ 25 ರಷ್ಟು ಸುಂಕವನ್ನು ವಿಧಿಸಿದ್ದರು. ಇದರರ್ಥ ದೇಶವು ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣಕ್ಕೆ ಹಣಕಾಸು ಒದಗಿಸುತ್ತಿದೆ ಎಂದು ಅವರು ಆರೋಪಿಸಿದ್ದರು. ಇದು ಭಾರತೀಯ ರಫ್ತಿನ ಮೇಲಿನ ಒಟ್ಟು ಸುಂಕವನ್ನು ಶೇಕಡಾ 50 ಕ್ಕೆ ಏರಿಸಿತು. ಇದು ಯಾವುದೇ ಅಮೇರಿಕನ್ ವ್ಯಾಪಾರ ಪಾಲುದಾರರಲ್ಲಿ ಅತ್ಯಧಿಕ ಎಂದು ಹೇಳಲಾಗಿದೆ.