ಎಲ್ಲಾ ರಾಜ್ಯಗಳಲ್ಲೂ ಅನರ್ಹ ಮತದಾರರಿಗೆ ಕೊಕ್

ನವದೆಹಲಿ, ಆಗಸ್ಟ್ 8:ಮತದಾರರ ಪಟ್ಟಿ ಪರಿಷ್ಕರಣೆ ನಿರಂತರ ಪ್ರಕ್ರಿಯೆಯಾದರೂ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತದೆ.
ಸದ್ಯದಲ್ಲೇ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ವಿಚಾರ ಮುಂಚೂಣಿಗೆ ಬಂದಿದೆ. ಕೇಂದ್ರ ಚುನಾವಣಾ ಆಯೋಗದ ಮೇಲೆ ಪ್ರಮುಖ ಪ್ರತಿಪಕ್ಷವಾಗಿರುವ ರಾಷ್ಟ್ರೀಯ ಕಾಂಗ್ರೆಸ್ ಗಂಭೀರ ಆರೋಪ ಮಾಡುತ್ತಿದೆ. 2024ರ ಲೋಕಸಭಾ ಚುನಾವ ಣೆಗೂ ಮುನ್ನ ದೇಶಾದ್ಯಂತ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳಲ್ಲೂ ಮತದಾರರ ಪಟ್ಟಿಗೆ ಹೊಸದಾಗಿ ಅರ್ಹರನ್ನು ಸೇರಿಸುವ ಹಾಗೂ ಅನರ್ಹರನ್ನು ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆ ನಡೆದಿದೆ.
ಅದೇ ರೀತಿ ವಿಧಾನಸಭಾ ಚುನಾವಣೆ ನಡೆಯುವ ಮುನ್ನ ಆಯಾ ರಾಜ್ಯಗಳಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ. ಕೇವಲ ಬಿಹಾರ ರಾಜ್ಯದಲ್ಲಿ ಮಾತ್ರ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿಲ್ಲ. ಉದಾಹರಣೆಗೆ ಹೊಸ ಮತದಾರರು ಸೇರ್ಪಡೆಯಾದರೆ, ನಿಧನ ಹೊಂದಿದವರು, ವಲಸೆ /ಸ್ಥಳಾಂತರಗೊಂಡವರು, ಎರಡು ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರುಳ್ಳವರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಗುತ್ತದೆ.
ಈ ರೀತಿಯ ಪರಿಷ್ಕರಣೆ ಸಂದರ್ಭದಲ್ಲಿ ಚುನಾವಣಾ ಆಯೋಗ ಮೊದಲು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗೆ ಅವಕಾಶ ನೀಡುತ್ತದೆ. ಒಂದು ವೇಳೆ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಅಳಿಸಿ ಹೋಗಿದ್ದರೆ, ಸೂಕ್ತ ದಾಖಲೆ ಒದಗಿಸಿ ಮರು ಸೇರ್ಪಡೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಅಂತಿಮ ಪಟ್ಟಿ ಪ್ರಕಟವಾದ ನಂತರ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದಿದ್ದರೆ, ಮತದಾರರ ಗುರುತಿನ ಚೀಟಿ ಹೊಂದಿದ್ದರೂ ಮತ ಚಲಾಯಿಸುವ ಹಕ್ಕು ದೊರೆಯುವುದಿಲ್ಲ. ಈ ವಿಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಆಯೋಗ ಬೀದಿ ನಾಟಕ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮಿಕೊಳ್ಳುತ್ತಾ ಬಂದಿದೆ.
ಚುನಾವಣಾ ಆಯೋಗ, ಆಯಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿ ಕಚೇರಿಗಳು, ಜಿಲ್ಲಾಮಟ್ಟದ ಚುನಾವಣಾಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಕಾಲಕಾಲಕ್ಕೆ ಮಾಹಿತಿ ನೀಡುತ್ತಾರೆ. ಇದು ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಚುನಾವಣಾ ಆಯೋಗ ಅನುಸರಿಸುತ್ತಾ ಬಂದಿರುವ ಪದ್ಧತಿ. ಆದರೂ ಮತದಾನದ ದಿನ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲ ಎಂಬ ಆರೋಪಗಳು ಕೇಳಿ ಬರುವುದು ಸಹಜ.
2024ರ ಜನವರಿ 1 ರಂದು ಚುನಾವಣಾ ಆಯೋಗ ಪ್ರಕಟಿಸಿರುವ ಮಾಹಿತಿ ಪ್ರಕಾರ ದೇಶದಲ್ಲಿ 969.8 ಮಿಲಿಯನ್(96,97,67,010 ಕೋಟಿ) ಅರ್ಹ ಮತದಾರರಿದ್ದರು (2019ರಲ್ಲಿ 896 ಮಿಲಿಯನ್ ಮತದಾರರು). ಐದು ವರ್ಷದಲ್ಲಿ 72.8 ಲಕ್ಷ ಮತದಾರರ ಸಂಖ್ಯೆ ಹೆಚ್ಚಳವಾಗಿತ್ತು. 18-19 ವರ್ಷದ ಯುವ ಮತದಾರರ ಸಂಖ್ಯೆ 18.4 ಮಿಲಿಯನ್ ಇತ್ತು. ಅಂದರೆ ಒಟ್ಟು ಮತದಾರರಲ್ಲಿ ಶೇ.1.89ರಷ್ಟಿದ್ದರು.
ಬಿಹಾರ ರಾಜ್ಯದಲ್ಲಿ ಸುಮಾರು 65 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಗಿದ್ದು, ಇದರ ವಿರುದ್ಧ ಪ್ರತಿಪಕ್ಷಗಳು ತೀವ್ರ ಆಕ್ಷೇಪವೆತ್ತಿ ಆಯೋಗದ ವಿರುದ್ಧ ಪ್ರತಿಭಟನೆಯ ಹಾದಿ ಹಿಡಿದಿವೆ. ಲಭ್ಯವಿರುವ ಮಾಹಿತಿ ಪ್ರಕಾರ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಅರ್ಹರಲ್ಲದ ಮತದಾರರನ್ನು ಅಳಿಸಿ ಹಾಕಲಾಗಿತ್ತು.
ಲಭ್ಯವಿರುವ ಪ್ರಕಾರ ಮಧ್ಯ ಪ್ರದೇಶ ರಾಜ್ಯದ ವಿಧಾನಸಭಾ ಚುನಾವಣೆಗೂ ಮುನ್ನ ಸುಮಾರು 12 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಸುಮಾರು 10 ಲಕ್ಷಕ್ಕೂ ಹೆಚ್ಚು ಮತದಾರರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಗಿತ್ತು. ಹರಿಯಾಣದಲ್ಲೂ ಸುಮಾರು 5 ಲಕ್ಷ ಹಾಗೂ ಮಿಜೋರಂನಲ್ಲಿ ಒಂದು ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿತ್ತು.
ಅದೇ ರೀತಿ ಕರ್ನಾಟಕದಲ್ಲೂ ಲೋಕಸಭಾ ಚುನಾವಣೆಗೂ ಮುನ್ನ 35,02, 328 ಮತದಾರರ ಸೇರ್ಪಡೆಯಾಗಿದ್ದರೆ, 11,14, 257 ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿತ್ತು.
ರಾಜ್ಯವಾರು ಮತದಾರರ ಪಟ್ಟಿಯಿಂದ ಅಳಿಸಿದ ಮತದಾರರ ವಿವರ:
ಬಿಹಾರ – 65 ಲಕ್ಷ
ಮಧ್ಯ ಪ್ರದೇಶ – 12 ಲಕ್ಷ
ಕರ್ನಾಟಕ – 11.14 ಲಕ್ಷ
ಆಂದ್ರಪ್ರದೇಶ – 10 ಲಕ್ಷ
ತೆಲಂಗಾಣ – 10 ಲಕ್ಷ
ಒಡಿಸ್ಸಾ – 5 ಲಕ್ಷ
ಹರಿಯಾಣ – 5 ಲಕ್ಷ
ಮಿಜೋರಾಂ – 1 ಲಕ್ಷ